ಗ್ಯಾಂಬಿಯ ನದಿ -
ಪಶ್ಚಿಮ ಅಫ್ರಿಕದ ಒಂದು ನದಿ. ಗಿನಿ ಗಣರಾಜ್ಯದ ಫೂಟ್ ಜಲಾನ್ ಪ್ರಸ್ಥಭೂಮಿಯಲ್ಲಿ ಸಮುದ್ರಕ್ಕೆ ಕೇವಲ 150 ಮೈ. ದೂರದಲ್ಲಿ ಹುಟ್ಟಿ, ಮೊದಲು ಈಶಾನ್ಯಾಭಿಮುಖವಾಗೂ ಅನಂತರ ಪಶ್ಚಿಮಾಭಿಮುಖವಾಗೂ, ಒಟ್ಟು ಸು. 700 ಮೈ. ದೂರ ಹರಿದು ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. ಅದು ಪಶ್ಚಿಮದ ಕಡೆಗೆ ತಿರುವುಗುವುದು ನೆರಿಚೊ ನದಿಯೊಂದಿಗೆ ಸೇರುವೆಡೆಯಲ್ಲಿ. ಅದರ ಮುಖ್ಯ ಉಪನದಿಗೆ ಗ್ರೇ. ಟೆಂಡಾ ಬೆಟ್ಟಗಳಿಂದ ಉತ್ತರಕ್ಕೆ ಹರಿದು ಗ್ಯಾಂಬಿಯ ರಾಜ್ಯದ ಎಲ್ಲೆಗೆ 25 ಮೈ. (40 ಕಿ.ಮೀ) ದೂರದಲ್ಲಿ ಗ್ಯಾಂಬಿಯ ನದಿಯನ್ನು ಸೇರುತ್ತದೆ. ರಾಜ್ಯದ ಗಡಿಯಲ್ಲಿ ವೇಗವಾಗಿ ಇಳಿಯುತ್ತದೆ. ಜೂನ್ ಮತ್ತು ನವೆಂಬರ್ ತಿಂಗಳುಗಳ ಮಧ್ಯೆ ನದಿಯಲ್ಲಿ ಪ್ರವಾಹ. ನದಿ ಸಮುದ್ರ ಸೇರುವೆಡೆಯಿಂದ 93 ಮೈ. (150 ಕಿಮೀ) ದೂರದಲ್ಲಿಯ ಎಲಿಫೆಂಟ್ ದ್ವೀಪದ ಬಳಿ ಅದು ಮತ್ತೆ ಪಶ್ಚಿಮದ ಕಡೆಗೆ ತಿರುಗುತ್ತದೆ. ಅಲ್ಲಿ ಸಾಮನ್ಯವಾಗಿ ನದಿಯ ನೀರು ಉಪ್ಪು. ಮಳೆಗಾಲದಲ್ಲಿ ಸಮುದ್ರದಿಂದ 130 ಕಿಮೀ. ದೂರದ ಬಲಿಂಗೊ ವರೆಗೆ ನೀರು ಉಪ್ಪಾಗಿರುತ್ತದೆ. ಕೆಲವು ವೇಳೆ 240 ಕಿಮೀ, ದೂರದ ಕುನ್ತಾರ್ ವರೆಗೂ ಮದಿ ಉಪ್ಪು ನೀರಿನಿಂದ ಕೂಡಿರುವುದುಂಟು. ನದಿಯ ಎರಡು ದಂಡೆಗಳನ್ನೂ ಗುಲ್ಮ ವೃಕ್ಷಗಳು ಆವರಿಸಿಕೊಂಡಿವೆ. ಇಲ್ಲಿ ನದಿಯ ಪಾತ್ರ ಹೆಚ್ಚು ಅಗಲ. ಎಲಿಫೆಂಟ್ ದ್ವೀಪದ ಬಳಿಯಿಂದಲೇ ನದಿಯ ಅಳಿವೆ ಪ್ರಾರಂಭವಾಗುತ್ತದೆನ್ನಬಹುದು. ಅಲ್ಲಿ 1 ಮೈ. ಅಗಲವಿರುವ ನದಿ, ಬ್ಯಾತಸ್ರ್ಟ್ ರೇವಿನ ಬಳಿ 7 ಮೈ. ಅಗಲವಾಗಿದೆ. ಆದರೆ ಬ್ಯಾತಸ್ರ್ಟ್‍ನ್ನೊಳಗೊಂಡಿರುವ ಸೇಂಟ್ ಮೇರಿ ದ್ವೀಪದ ದಕ್ಷಿಣ ಚಾಚಿಗೂ ಅದರ ಎದುರಿಗಿನ ದಡಕ್ಕೂ ನಡುವೆ ನದಿಯ ಅಗಲ 21/2 ಮೈ. ಅಳಿವೆ ಕೆಳಭಾಗದಲ್ಲಿ ಪಾತ್ರದ ನಡುವೆ 3/4 ಮೈ. ಅಗಲದ ನಾಲೆಯಲ್ಲಿ ಹಡಗು ಸಂಚಾರಕ್ಕೆ ಸೌಲಭ್ಯವುಂಟು. ಅದರೆ ಬ್ಯಾತಸ್ರ್ಟಗೂ ಸಮುದ್ರಕ್ಕೂ ನಡುವೆ ಎರಡು ಎಡೆಗಳಲ್ಲಿ ನದಿ ತೀವ್ರವಾಗಿ ತಿರುಗುತ್ತದೆ. ನದೀಮುಖಕ್ಕೆ ಅಡ್ಡಲಾಗಿ ಇರುವ ಅಡಚಣೆಯಿಂದಾಗಿ ಹಡಗಿನ ಪ್ರವೇಶಕ್ಕೆ 26'  ಅಗಲದಷ್ಟು ಮಾತ್ರ ಅವಕಾಶವುಂಟು. ಸಣ್ಣ ಹಡಗುಗಳು ಇದರ ಮೂಲಕ ಸ್ವಲ್ಪ ದೂರದವರೆಗೆ ಹೋಗಿ ಬರಬಹುದು.

ಟಾಲಿಮಿಗೂ ಅರಬ್ ಭೂಗೋಳ ಶಾಸ್ತ್ರಜ್ಞರಿಗೂ ಗ್ಯಾಂಬಿಯ ನದಿ ಗೊತ್ತಿತು. 1291 ರ ಇಟಲಿಯ ಜಿನೋವ ನಗರದ ನಾವಿಕರು ಗ್ಯಾಂಬಿಯ ನದಿಯ ವರೆಗೂ ಬಂದಿದ್ದಿರಬಹುದು. ಪೋರ್ಚುಗೀಸರಂತೂ ಇದನ್ನು ಕಂಡದ್ದು ನಿಜ. ಆದರೆ ಗ್ಯಾಂಬಿಯ ನದಿಯನ್ನು ಮೊದಲು ಪರಿಶೋಧಿಸಿದವನು (1455) ವೆನಿಸಿನ ಅಲ್ ವಿಸ್ ಕ ಡ ಮೊಸ್ತೊ. ಅನಂತರ ಒಳನಾಡನ್ನು ಪರಿಶೋಧಿಸಿದವರು ಗ್ಯಾಂಬಿಯದ ಮೂಲಕ ಹೋಗುತ್ತಿದ್ದರು. ಅವರಲ್ಲಿ ಪ್ರಮುಖನಾದವನು ಮುಂಗೊ ಪಾರ್ಕ್. ಅತ 1795 ಮತ್ತು 1805 ರಲ್ಲಿ ಕೈಗೊಂಡ ಎರಡು ಪ್ರವಾಸಗಳನ್ನೂ ಈ ನದಿಯಿಂದಲೇ ಆರಂಭಿಸಿದ. ಗ್ಯಾಂಬಿಯದ ಉಗಮ ಸ್ಥಳವನ್ನು ಪತ್ತೆ ಹಚ್ಚಿದವನು (1818) ಗ್ಯಾಪರ್ಡ್ ಮೋಲೀನ್ ಎಂಬ ಫ್ರೆಂಚ್ ಪ್ರಜೆ. ನದಿಯ ಮಧ್ಯಭಾಗವನ್ನು ಪರಿಶೋಧಿಸಿದವರು ಆರ್. ಜೆ. ಮ್ಯಾಕ್‍ಡಾನೆಲ್ (1851) ಮತ್ತು ವಿ. ಎಸ್. ಗೌಲ್ಡ್ಸ್‍ಬರಿ (1881). ಮ್ಯಾಕ್‍ಡಾನೆಲ್ ಅದನ್ನು ಪರಿಶೋಧಿಸಿದ ಕಾಲದಲ್ಲಿ ಆ ವಸಾಹತಿನ ರಾಜ್ಯಪಾಲನಾಗಿದ್ದ.	
(ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ